ತೊಗಲುಗೊಂಬೆಯಾಟ -
ಗೊಂಬೆಯಾಟದಲ್ಲಿನ ಒಂದು ವಿಧಾನ. ಜಗತ್ತಿನಲ್ಲಿ ಗೊಂಬೆಯಾಟ ತುಂಬ ಪ್ರಾಚೀನ ಕಲೆ. ಮನುಷ್ಯ ತನ್ನ ನಾನಾ ಭಾವನೆಗಳನ್ನು ಪ್ರಕಟಪಡಿಸುವುದಕ್ಕೆ ತೊಡಗಿದಾಗಲೇ ಗೊಂಬೆಗಳನ್ನು ತನ್ನ ಕಲಾಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿಕೊಂಡ ಎನ್ನಲಾಗಿದೆ. ಗೊಂಬೆಯಾಟವನ್ನು ಇವತ್ತಿಗೂ ಪ್ರಪಂಚದ ನಾನಾ ದೇಶಗಳಲ್ಲಿ ಆಡುತ್ತಾರೆ; ಜನ ಹಣ ಕೊಟ್ಟು ನೋಡುತ್ತಾರೆ. ಇದರಲ್ಲಿ ಮುಖ್ಯವಾಗಿ ಎರಡು ವಿಧ: 1. ಸೂತ್ರದ ಗೊಂಬೆಯಾಟ, 2. ನೆರಳಿನಾಟ. ತೊಗಲುಗೊಂಬೆಗಳನ್ನು ನೆರಳಿನಾಟವಾಗಿ ಬಳಸುವುದು ರೂಢಿ.

ತೊಗಲುಗೊಂಬೆಯಾಟ ಕರ್ಣಾಟದ ಬಹುಭಾಗಗಳಲ್ಲಿ ಪ್ರಚಾರದಲ್ಲಿದೆ. ಅಲ್ಲದೆ, ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕೇರಳದ ಕೆಲವು ಪ್ರಾಂತ್ಯಗಳಲ್ಲೂ ಜಾವಾ, ಇಂಡೋನೇಷ್ಯ, ಥೈಲೆಂಡ್ ಮುಂತಾದ ಹೊರದೇಶಗಳಲ್ಲೂ ಬಳಕೆಯಲ್ಲಿದೆ. ಆದರೂ ಈ ಆಟದ ಪ್ರಸಾರ ಮಾಧ್ಯಮಗಳಲ್ಲಿ ಹೊಸತಂತ್ರ, ಹೊಸತನಗಳಿಲ್ಲದೆ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಒಂದು ಸಮಾಧಾನವೆಂದರೆ ಈ ಭಾರತದಲ್ಲಿ ಇಂದಿಗೂ ಜನಪದದಲ್ಲಿ ಜೀವ ಹಿಡಿದುಕೊಂಡು ಬರುತ್ತಿದ್ದು, ವರ್ಷಕ್ಕೆ ಹತ್ತಾರು ನಾಟಕ ಪ್ರಯೋಗಗಳಾದರೂ ಆಗುತ್ತಿರುವುದು.

ಕರ್ಣಾಟಕದಲ್ಲಿ ಹಾಗೂ ಭಾರತದಲ್ಲಿ ತೊಗಲುಗೊಂಬೆಯಾಟ ಎಂದಿನಿಂದ ಆರಂಭವಾಯಿತು, ಯಾವ ಭಾಗದಲ್ಲಿ ಮೊದಲು ಹುಟ್ಟಿ ಹೇಗೆ ಪ್ರಾಚುರ್ಯಗಳಿಸಿಕೊಂಡಿತು ಎಂಬ ಬಗೆಗೆ ಖಚಿತವಾಗಿ ತಿಳಿಸುವ ಸಾಕ್ಷ್ಯಾಧಾರಗಳು ಇಲ್ಲ. ಗೊಂಬೆಯಾಟ ಭಾರತದಲ್ಲಿ ರೂಢಿಗೆ ಬಂದ ಮೇಲೆ, ಚರ್ಮದ ಗೊಂಬೆಗಳನ್ನು ಮಾಡಿ ಕುಣಿಸಿ ಆಟವಾಡಿಸುವ ಕಲೆ ಬೆಳೆದಿರಬೇಕು. ಕರ್ಣಾಟಕದಲ್ಲಿ ತೊಗಲು ಗೊಂಬೆಯ ಆಟ ಪ್ರಾರಂಭವಾಗಿ ಕನಿಷ್ಠ ಪಕ್ಷ 500 ವರ್ಷಗಳಾದರೂ ಆಗಿವೆ. ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿವೆ. ಈ ನಾಡಿನಲ್ಲಿ ತೊಗಲುಗೊಂಬೆಗಳನ್ನು ಬಳಸಿ ನಾಟಕವಾಡುವ ಗೊಂಬೇರಾಮರು ಅಥವಾ ಕಿಳ್ಳೇಕ್ಯಾತರು ಮೂಲತಃ ಮಹಾರಾಷ್ಟ್ರ ಕರ್ಣಾಟಕದ ಗಡಿ ಭಾಗಕ್ಕೆ ಸೇರಿದವರು. ಇವರೆಲ್ಲರ ಮನೆಮಾತು ಮರಾಠಿ. ಇವರ ಉಗಮ, ವಿಕಾಸದ ಬಗೆಗೆ ಅನೇಕ ದಂತಕಥೆಗಳಿವೆ. ಒಂದು ಕಥೆಯ ಪ್ರಕಾರ, ಗೊಂಬೇರಾಮರು ಮೂಲತಃ ಮಹಾರಾಷ್ಟ್ರ ಪ್ರಾಂತದಲ್ಲಿ ಬೇಸಾಯಗಾರರಾಗಿದ್ದರು. ಅವರಲ್ಲಿ ಒಬ್ಬಳು ಕತ್ತಾರೆ ಕಾಳಾಚಾರಿ ಎಂಬ ಚಿನಿವಾರ ವಾಜನೊಂದಿಗೆ ಸಂಬಂಧವಿರಿಸಿಕೊಂಡಿದ್ದಳು. ಅನಂತರ ಆಕೆ ಆತನಿಂದ ಏಳುಮಂದಿ ಮಕ್ಕಳನ್ನು ಪಡೆದಳು. ಜಾತಿಯಿಂದ ಹೊರದೂಡಲ್ಪಟ್ಟ ಈ ಮಕ್ಕಳು ಒಕ್ಕಲುತನದ ಬದಲಾಗಿ ತಂದೆ ಅಕ್ಕಸಾಲಿಗನಿಂದ ಕುಶಲಕಲೆಯನ್ನು ಕಲಿತರು. ಅಕ್ಕಸಾಲಿಗ ತನ್ನ ಮಕ್ಕಳಿಗೆ ಗೊಂಬೆಗಳನ್ನು ರಚಿಸಿ ನಾಟಕವಾಡುವುದರ ಬಗೆಗೆ ತರಬೇತಿ ನೀಡಿದ. ಈ ಹೊಸಕಲೆ ಜನತೆಗೆ ಹಿಡಿಸಿತು. ಜೀವನೋಪಾಯ ಸುಲಭವಾಯಿತು. ಹೀಗೆ ಹೊಸ ಜಾತಿಯವರಾಗಿ, ಹೊಸ ಕಲಾ ಮಾಧ್ಯಮದೊಂದಿಗೆ ಹೊಸ ಹೊಸ ಜಾಗಗಳಲ್ಲಿ ಜೀವನಾವಕಾಶಗಳನ್ನು ಅರಸುತ್ತ ಹೊರಟ ಈ ಜನ ಅಲೆಮಾರಿಗಳಾದರು. ಕ್ರಮೇಣ ಇವರೊಂದಿಗೆ ಬಂಧು ಬಳಗವೂ ಸೇರಿಕೊಂಡಿತು. ಅನಂತರ ಇವರದೇ ಒಂದು ಪಂಗಡವಾಯಿತು. ಈ ಜನ ತಮ್ಮ ಮೂಲಪ್ರಾಂತ್ಯವನ್ನು ಬಿಟ್ಟುಬಂದು, ಕ್ರಮೇಣ ದಕ್ಷಿಣಭಾರತದ ವಿವಿಧ ಪ್ರದೇಶಗಳಲ್ಲಿ ನೆಲಸಿದರು.

ಈ ಕಥೆ ದಂತಕಥೆಯಂತೆ ತೋರಿದರೂ ಇದರಲ್ಲಿ ಸತ್ಯಾಂಶಗಳು ಇಲ್ಲದೇ ಇಲ್ಲ. ಗೊಂಬೇರಾಮರು ಆಯಾ ಪ್ರಾಂತ್ಯದ ಭಾಷೆಯನ್ನು ಕಲಿತು ಅದೇ ಭಾಷೆಯಲ್ಲೇ ನಾಟಕವಾಡುತ್ತಿದ್ದರೂ ಅವರ ಮನೆ ಮಾತು ಮರಾಠಿಯಾಗಿರುವುದು ಇದಕ್ಕೆ ಪ್ರಬಲ ನಿದರ್ಶನ. ಜೊತೆಗೆ ಬಳ್ಳಾರಿ ಪ್ರಾಂತ್ಯದಲ್ಲಿ ಹಾಗೂ ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ನೆಲಸಿರುವ ಈ ಕಿಳ್ಳೇಕ್ಯಾತರು, ತಮ್ಮ ನಾಟಕದ ಆರಂಭದಲ್ಲಿ ಗಣಸ್ತುತಿ, ಶಾರದಾಸ್ತುತಿ, ಸಭಾವಂದನೆಯೇ ಆದಿಯಾದ ಸಾಂಪ್ರದಾಯಿಕ ವಿಧಿಗಳನ್ನು ನೆರವೇರಿಸಿದ ನಂತರ ತಮಗೆ ಈ ಕಸುಬನ್ನು ಕಲಿಸಿಕೊಟ್ಟ ಓಜನನ್ನು ಸ್ಮರಿಸಿ ಹಾಡುತ್ತ, ಬಿರುದುವಾಳ್ಳದಿ ಭಿಕ್ಷಮುಮಾದಿ (ಬಿರುದು,ಕೀರ್ತಿ ಆ ಗುರುವಿನದು; ಅದರ ಪ್ರತಿಫಲ ನಮ್ಮದು) ಎಂದು ಕೊಂಡಾಡುವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವುದು ಮತ್ತೊಂದು ಸಾಕ್ಷಿ. ವಾಸ್ತವಿಕವಾಗಿ ಈಗ ಜನತೆಗೂ ಮೂಲ ಬುಡಕಟ್ಟಿನ ಜನತೆಗೂ ಸಂಬಂಧವಿದೆಯೆ, ಇದ್ದರೆ ಯಾವ ಯಾವ ಬಗೆಯದು, ತೊಗಲುಗೊಂಬೆಯಾಟದಲ್ಲಿ ಕಂಡುಬರುವ ಪ್ರಮುಖ ಪರಿವರ್ತನೆಗಳ ಸ್ವರೂಪವೇನು, ಇದರಿಂದಾಗಿರುವ ಪರಿಣಾಮಗಳೇನು- ಇಂಥ ಮುಖ್ಯ ಅಂಶಗಳ ಬಗೆಗೆ ಸಂಶೋಧನೆ ನಡೆಯಬೇಕಾಗಿದೆ.
ಈ ಆಟದಲ್ಲಿ ಬರುವ ವಿವಿಧ ಪಾತ್ರಗಳ ಕುದುರೆ ಹಸು ಆನೆ ಮುಂತಾದ ಪ್ರಾಣಿಗಳ, ರಥ ಬಾಣ ಪಲ್ಲಕ್ಕಿ ಮುಂತಾದ ವಸ್ತುಗಳ ಸ್ಥೂಲ ಹೋಲಿಕೆಯುಳ್ಳ ಚರ್ಮದ ಗೊಂಬೆಗಳನ್ನು ಬಳಸುವುದು ರೂಢಿ. ಗೊಂಬೇರಾಮರು ಬಳಸುವ ಪ್ರತಿಯೊಂದು ಗೊಂಬೆಯೂ ಚರ್ಮದಿಂದ ಮಾಡಿದುದೇ ಆಗಿರುತ್ತದೆ. ಏಕೆಂದರೆ ಪಾರದರ್ಶಕತೆ ಚರ್ಮಕ್ಕಿರುವಂತೆ ಮರ, ಲೋಹ ಇತ್ಯಾದಿಯಾದವುಗಳಿಗಿಲ್ಲ. ಢಾಳಾಗಿ ಉರಿಯುವ ದೊಡ್ಡ ದೀವಟಿಗೆಯನ್ನೋ ಈಚೆಗೆ ಗ್ರಾಮಗಳಲ್ಲಿ ಧಾರಾಳವಾಗಿ ಸಿಗುತ್ತಿರುವ ರಜನೀಕಾಂತ ದೀಪಗಳನ್ನೋ ಬೆಳಗಿಸಿ, ಆ ಬೆಳಕಿನ ಮುಂದೆ ವಿವಿಧ ಪಾತ್ರಗಳ ಚರ್ಮದ ಗೊಂಬೆಗಳನ್ನು ಹಿಡಿದು, ರಂಗಮಂದಿರದ ಮುಂದೆ ಅಡ್ಡವಾಗಿ ಕಟ್ಟಲಾಗಿರುವ ಬಿಳಿಯ ಪಂಚೆಯ ಅಥವಾ ಬಿಳಿಯ ಪರದೆಯ ಹಿಂದೆ ಗೊಂಬೆಗಳನ್ನು ಕುಣಿಸುತ್ತಾರೆ. ಬಡಗಲಪಾಯ ಹಾಗೂ ತೆಂಕಲಪಾಯಗಳಲ್ಲಿ ದೊಡ್ಡ ಪಂಚೆಯನ್ನೂ ಮೂಡಲಪಾಯದಲ್ಲಿ ಸುಮಾರು ಎಂಟು ಅಡಿ ಉದ್ದ, ಹನ್ನೆರಡು ಅಡಿ ಅಗಲವುಳ್ಳ ಬಿಳಿಯ ಪರದೆಯನ್ನೂ ಬಳಸುವುದು ವಾಡಿಕೆ. ಈ ಪರದೆಯನ್ನು ಕಟ್ಟಿ ಪುಟ್ಟ ರಂಗಮಂದಿರ ರಚಿಸುವ ಕಲೆ ಗೊಂಬೇರಾಮರ ಆಟಕ್ಕೆ ವಿಶಿಷ್ಟವಾಗಿರುವಂಥದ್ದು.

ಗೊಂಬೆರಾಮರು ತಮ್ಮ ನಾಟಕ ಕಥೆಗಳಿಗೆ ಕರ್ಣಾಟಕದಲ್ಲಿ ಪ್ರಚುರವಿರುವ ಯಕ್ಷಗಾನ ಬಯಲಾಟಗಳನ್ನೇ ಬಳಸಿಕೊಳ್ಳುತ್ತಾರೆ. ಅವು ರಾಮಾಯಣ, ಮಹಾಭಾರತ ಹಾಗೂ ಭಾಗವತಗಳನ್ನು ಆಧರಿಸಿರುವಂಥದೇ. ವಿಶೇಷವಾಗಿ ಯುದ್ಧಪ್ರಸಂಗಗಳನ್ನು ಕರುಣ ಹಾಗೂ ಹಾಸ್ಯರಸಗಳನ್ನೂ ತೊಗಲುಗೊಂಬೆಯಾಟದಲ್ಲಿ ತುಂಬ ಚೆನ್ನಾಗಿ ಪ್ರಕಟಿಸುತ್ತಾರೆ. ರಾತ್ರಿ ಸುಮಾರು ಒಂಭತ್ತು ಗಂಟೆಯಿಂದ ಬೆಳಗಿನ ಆರು ಗಂಟೆಯವರೆಗೂ ಸಾಗುವ ಈ ನಾಟಕಗಳನ್ನು ಗ್ರಾಮೀಣರು ಬಯಲಿನಲ್ಲಿ ಕುಳಿತು ನೋಡಬೇಕಾಗುವುದರಿಂದ, ಮಳೆಗಾಲ ಆಟಕ್ಕೆ ಸೂಕ್ತವಲ್ಲ. ತುಂಬ ಪ್ರಶಸ್ತಕಾಲವೆಂದರೆ ಬೇಸಗೆ. ಆಗ ರೈತಾಪಿ ಜನರ ಕಣಮನೆಯ ಕೆಲಸಗಳೆಲ್ಲ ಮುಗಿದು, ರಾತ್ರಿ ಮನೆಗೆಬಂದು, ಬಿಡುವು ಧಾರಾಳವಾಗಿ ಇರುವುದರಿಂದ ಹಣಕೊಟ್ಟು ಗೊಂಬೆಯಾಟಗಳನ್ನು ಆಡಿಸುತ್ತಾರೆ. ಊರಿನ ಬಹುಮಂದಿ ಬಂದು ನೋಡಿ ಆನಂದಿಸುತ್ತಾರೆ. ತಂಗಲು ಅನುಕೂಲವಿರುವ ಕಡೆ ಗೊಂಬೇರಾಮರು ತಿಂಗಳಗಟ್ಟಲೆ ತಂಗಿದ್ದು ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ ಗೊಂಬೆಯಾಟವಾಡಿ ಬರುತ್ತಾರೆ. ಇವರು ಗ್ರಾಮೀಣರನ್ನು ಹೊಗಳಿ, ಬೇಡಿ ಕಾಡಿ ತಮ್ಮ ಜೀವನಾವಶ್ಯಕ ವಸ್ತುಗಳನ್ನು ಪಡೆದುಕೊಂಡು ಬದುಕುತ್ತಾರೆ. ಮಳೆಗಾಲದಲ್ಲಿ ತಮ್ಮ ಸ್ವಂತ ಹೊಲ ಹಾಗೂ ಮನೆಯ ಕೆಲಸಗಳಲ್ಲಿ ತೊಡಗುವುದುಂಟು.

ಗೊಂಬೆಗಳ ರಚನೆ : ತೊಗಲುಗೊಂಬೆಗಳನ್ನು ಜಿಂಕೆಯ, ಮೇಕೆಯ ಹಾಗೂ ದನಕರುಗಳ ಚರ್ಮದಿಂದ ರಚಿಸುತ್ತಾರೆ. ಮೊದಲು ಚರ್ಮವನ್ನು ಹದಗೊಳಿಸಿ, ಒಣಗಿದ ಚರ್ಮದ ಮೇಲೆ, ಗೊಂಬೇರಾಮರಲ್ಲಿ ಪ್ರಖ್ಯಾತನಾಗಿರುವ ಕಲಾವಿದ ದಬ್ಬಳದಂಥ ಸಾಧನದಿಂದ ಆವಶ್ಯಕವಾದ ಮೂರ್ತಿಗಳ ರೇಖಾಚಿತ್ರವನ್ನು ಬಿಡಿಸಿಕೊಳ್ಳುತ್ತಾನೆ. ಅನಂತರ ಅವನ್ನು ತಕ್ಕಂತೆ ಕತ್ತರಿಸಿ, ಸೂಕ್ತ ಬಣ್ಣಗಳನ್ನು ಆಯಾ ಭಾಗಗಳಿಗೆ ಹಚ್ಚುತ್ತಾನೆ. ಇದ್ಕಕೆ ಸಾಕಷ್ಟು ಪರಿಣತಿ ಹಾಗೂ ಸಮಯ ಅವಶ್ಯಕ. ಒಂದೊಂದು ಕಥೆಗೂ ಹತ್ತಾರು ವಿವಿಧ ಪಾತ್ರಗಳು ಬೇಕಾಗುವುದರಿಂದ, ಪ್ರತಿಯೊಂದು ಮೇಳದವರೂ ಇಪ್ಪತ್ತು ಮೂವತ್ತು ಕಥೆಗಳನ್ನು ಆಡಬಲ್ಲವರಾದ್ದರಿಂದ, ನೂರಾರು ವಿವಿಧ ಗೊಂಬೆಗಳು ಬೇಕಾಗುತ್ತವೆ. ಈ ಗೊಂಬೆಗಳೇ ಇವರ ಅಮೂಲ್ಯ ಚರ ಆಸ್ತಿ. ಸ್ಥಿರ ಆಸ್ತಿಯಂತೆ ಇವನ್ನೂ ಆಯಾ ಕುಟುಂಬದ ಮುಂದಿನ ಪೀಳಿಗೆಯವರು ಹಂಚಿಕೊಳ್ಳುವುದುಂಟು.
ತೊಗಲುಗೊಂಬೆಗಳ ಕೈಕಾಲುಗಳು ಕೊರಳು, ನಡು, ಇವು ಅತ್ತಿತ್ತ ಆಡುವಂತೆ ವ್ಯವಸ್ಥೆ ಮಾಡಿರುತ್ತಾರೆ. ಚಲಿಸಬೇಕಾದ ಅವಯವಗಳನ್ನು ಮೂಲದೇಹ ಭಾಗದಿಂದ ಕತ್ತರಿಸಿ, ಸಣ್ಣ ದಾರದಿಂದ ಕಟ್ಟಿರುತ್ತಾರೆ. ಬಿದಿರಿನ ಸಣ್ಣ ಸಣ್ಣ ಕಡ್ಡಿಗಳನ್ನು ಗೊಂಬೆಗಳ ನೆತ್ತಿಯಿಂದ ಮಧ್ಯಭಾಗಕ್ಕೆ ಕಟ್ಟಿದ್ದು, ಕೈ ಮುಂತಾದ ಚಲನೆಯುಳ್ಳ ಭಾಗಗಳೂ ಬೇರೆ ಬೇರೆ ಕಡ್ಡಿಗಳನ್ನು ಕಟ್ಟಿರುತ್ತಾರೆ. ಈ ಕಡ್ಡಿಗಳ ಆಧಾರದಿಂದ ಗೊಂಬೆಗಳನ್ನು ಹಿಡಿದಿದ್ದು, ನೋಡುವವರಿಗೆ ತಮ್ಮ ಚಲಿಸುವ ಕೈಗಳು ಕಾಣದಿರುವಂತೆ ಜಾಣ್ಮೆಯಿಂದ ಗೊಂಬೆಗಳನ್ನು ಕುಣಿಸುತ್ತಾರೆ, ಮಣಿಸುತ್ತಾರೆ. ಬಾಣ ಬಿಡಿಸಿ, ಕೈ, ತಲೆ, ಸೊಂಟ ಮುಂತಾದ ಭಾಗಗಳು ಕತ್ತರಿಸಿ ಬಿದ್ದುಹೋದಂತೆ ತೋರಿಸುತ್ತಾರೆ. ಹಿಮ್ಮೇೀಳದವರ ಮೇಳಗೀತ ಹಾಗೂ ಹಾರ್ಮೋನಿಯಂ ತಬಲಗಳ ಹಿನ್ನೆಲೆಯ ವಾದ್ಯಗಳಿಂದ ನಾಟಕ ರಸವತ್ತಾಗಿ, ತೊಗಲುಗೊಂಬೆಗಳೇ ನಟರೆಂಬ ಕಲ್ಪನೆ ಜನರಲ್ಲಿ ಮೂಡುತ್ತದೆ. ಜೊತೆಗೆ ಪಾತ್ರಗಳ ನಡುವಣ ಸಂಭಾಷಣೆಗಳನ್ನೂ ಹಿಮ್ಮೇೀಳದವರು ರಸವತ್ತಾಗಿ ಬೆಳೆಸುತ್ತಾರೆ. ತುಮಕೂರು, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ವಾಸಿಸುವ, ಹತ್ತಾರು ಕಥೆಗಳನ್ನು ಆಡುವ ಗೊಂಬೆರಾಮರು ಪ್ರತಿ ಬೇಸಗೆಯಲ್ಲಿಯೂ ಊರೂರು ಸುತ್ತುತ್ತಾರೆ. ಇಂಥ ನಾಟಕವನ್ನೇ ಆಡಬೇಕು ಎಂದು ಸೂಚಿಸುವ ಅವಕಾಶ ನಾಟಕ ಆಡಿಸುವವರಿಗೆ ಇರುತ್ತದೆ. ತೊಗಲುಗೊಂಬೆಯಾಟದಲ್ಲಿ ಪಾಲ್ಗೊಳ್ಳುವ ಆರೆಂಟು ಮಂದಿ ಕಲಾವಿದರಿಗೂ ಅನೇಕ ಕಥೆಗಳು ಕಂಠಪಾಠವಾಗಿದ್ದು, ಮುಖ್ಯ ಪದಗಳನ್ನು ಮಾತ್ರ ಪ್ರತಿಮಾಡಿಕೊಂಡಿರುತ್ತಾರೆ.

ಬದಲಾಗುತ್ತಿರುವ ಯುಗಧರ್ಮಕ್ಕೆ ತಕ್ಕಂತೆ ತೊಗಲುಗೊಂಬೆಯಾಟದಲ್ಲಿಯೂ ಸುಧಾರಣೆಗಳಾಗುವುದು ಅವಶ್ಯಕ. ಇಲ್ಲದಿದ್ದರೆ ಈ ಕಲೆ ಮೂಲೆಗುಂಪಾಗಿ, ಗತಕಾಲದ ಕಲೆಯಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ. ಚರ್ಮದ ಬದಲಿಗೆ ಪ್ಲಾಸ್ಟಿಕ್ ಹಾಳೆಗಳನ್ನು ಉಪಯೋಗಿಸುವುದು; ಒಂದು ದೀಪದ ಬದಲಿಗೆ ವಿವಿಧ ಕೋನಗಳಿಂದ ಹಲವಾರು ದೀಪಗಳನ್ನು ಒದಗಿಸವುದು; ರಂಗಮಂಟಪವನ್ನು ಇನ್ನೂ ವಿಸ್ತರಿಸಿಕೊಳ್ಳುವುದು; ಹಿಮ್ಮೇಳದ ಕಲಾವಿದ ಪಾತ್ರಗಳಿಗೆ ತಕ್ಕಂಥ ಧ್ವನಿಯನ್ನು ಒದಗಿಸುವುದು- ಇವೇ ಮೊದಲಾದ ಸುಧಾರಣೆಗಳನ್ನು ತಂದರೆ ಈ ಆಟ ಹೆಚ್ಚು ಪರಿಣಾಮಕಾರಿಯಾಗಿ ಎಲ್ಲರನ್ನೂ ಆಕರ್ಷಿಸಬಲ್ಲದು. 	    (ಎನ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ